Success story of government school student

ಇಂಗ್ಲೆಂಡಿನಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಬಂಟ್ವಾಳದ ವಿಶೇಷ ಚೇತನ ಹುಡುಗಿ

ಸಾಧಿಸಬೇಕೆಂಬ ಛಲವೊಂದಿದ್ದರೆ ಯಾವ ನ್ಯೂನತೆಯೂ ಅಡ್ಡಿಬರಲಾರದು ಎಂಬುದಕ್ಕೆ ಬಂಟ್ವಾಳ ತಾಲೂಕಿನ ಯಶಸ್ವಿ ಉದಾಹರಣೆ. ಹುಟ್ಟುವಾಗಲೇ ಶೇಕಡಾ 100 ರಷ್ಟು ಶ್ರವಣ ದೋಷ ಹೊಂದಿರುವ ಈ ಹುಡುಗಿ ಮೊನ್ನೆ ಜುಲೈ ಆರರಿಂದ ಹದಿನಾರನೇ ತಾರೀಕಿನವರೆಗೆ ಇಂಗ್ಲೆಂಡಿನ ಮ್ಯಾಂಚೆಸ್ಟರ್‌ ನಲ್ಲಿ ನಡೆದ ಅಂತರರಾಷ್ಟ್ರೀಯ ಶ್ರವಣ ನ್ಯೂನತೆ ಇರುವ ವ್ಯಕ್ತಿಗಳ ಚೆಸ್ ಪಂದ್ಯಾಟದಲ್ಲಿ ಕಂಚಿನ ಪದಕ ವನ್ನು ಗಳಿಸುವ ಮೂಲಕ ದೇಶದ ಪತಾಕೆಯನ್ನು ವಿದೇಶದಲ್ಲಿ ಹಾರಿಸಿದ್ದಾಳೆ..

ಇದಕ್ಕಿಂತ ಮೊದಲು ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಹಾಗೂ ಮಧ್ಯಪ್ರದೇಶದ ಜಬಲಾಪುರದಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗಳಿಸಿದ್ದಾಳೆ. ಸಾಮಾನ್ಯ ವಿದ್ಯಾರ್ಥಿಗಳ ಜೊತೆ ಮಂಗಳೂರು ,ಮೈಸೂರು, ಬೆಂಗಳೂರು, ಕೊಚ್ಚಿ, ಮುಂಬೈ ಇನ್ನಿತರ ಸ್ಥಳಗಳಲ್ಲಿ ನಡೆದ ಚೆಸ್ ಪಂದ್ಯಾಟದಲ್ಲಿ ಜಯಗಳಿಸಿ ತಾನು ಯಾರಿಗೂ ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟಿದ್ದಾಳೆ.

ಕೇವಲ ಚೆಸ್ ಮಾತ್ರವಲ್ಲ , ಭರತನಾಟ್ಯ , ಚಿತ್ರಕಲೆ, ಛದ್ಮವೇಷ ಸ್ಪರ್ಧೆ ಮುಂತಾದ ಕ್ಷೇತ್ರದಲ್ಲಿ ಸ್ಪರ್ಧಿಸಿ ಪ್ರಶಸ್ತಿಗಳನ್ನು ಪಡೆದಿದ್ದಾಳೆ.ಅಲ್ಲದೇ ಕಲಿಕೆಯಲ್ಲಿಯೂ ಶೇ. 90 ಕ್ಕಿಂತಲೂ ಅಧಿಕ ಅಂಕವನ್ನು ಪಡೆಯುತ್ತಿದ್ದಾಳೆ.ಪ್ರಸ್ತುತ ಬಂಟ್ವಾಳ ತಾಲೂಕಿನ ಸರಕಾರಿ ಪ್ರೌಢಶಾಲೆ ಕಡೇಶಿವಾಲಯದಲ್ಲಿ 10 ನೇ ತರಗತಿ ಓದುತ್ತಾ ಪುತ್ತೂರಿನ ಜೀನಿಯಸ್ ಚೆಸ್ ಸ್ಕೂಲಿನಲ್ಲಿ ಕಳೆದ ಮೂರು ವರ್ಷದಿಂದ ಚೆಸ್ ತರಬೇತಿ ಪಡೆಯುತ್ತಿದ್ದಾಳೆ.ಈಕೆಯ ಈ ಎಲ್ಲಾ ಸಾಧನೆಯ ಹಿಂದ ಇರುವವರು ಇವಳ ತಂದೆ ತಿಮ್ಮಪ್ಪ ಹಾಗೂ ತಾಯಿ ಯಶೋಧಾ.ಪೋಷಕರು ಈಕೆಯ ಎಲ್ಲಾ ಆಸಕ್ತಿಗೆ ಪ್ರೋತ್ಸಾಹವನ್ನು ಚಿಕ್ಕಂದಿನಿಂದಲೂ ನೀಡುತ್ತಿದ್ದಾರೆ.ನಿಜಕ್ಕೂ ಇವರು ಆದರ್ಶ ಪೋಷಕರು. ಎಲ್ಲಾ ಅಡೆತಡೆಗಳನ್ನು ಮೀರಿ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಜಯಗಳಿಸಿದ ಕುಮಾರಿ ಯಶಸ್ವಿ ಎಲ್ಲರಿಗೂ ಮಾದರಿಯೆನಿಸಿದ್ದಾಳೆ.
ಮುಂದೆಯೂ ಇನ್ನಷ್ಟು ಯಶಸ್ಸು ಈಕೆಗೆ ಲಭಿಸಲಿ ಎಂಬುದು ಎಲ್ಲರ ಹಾರೈಕೆ

Leave a Reply