Nidagundi Government School

ನನಗೆ ದೊಡ್ಡ ದೊಡ್ಡ ಹುದ್ದೆಯಲ್ಲಿರುವವರ ಸಂಪರ್ಕ ಇಲ್ಲ, ರಾಜಕಾರಣಿಗಳಂತೂ ಯಾರೂ ವೈಯಕ್ತಿಕವಾಗಿ ಪರಿಚಯವಿಲ್ಲ. ಕೆಲವು ದೊಡ್ಡ ವ್ಯಕ್ತಿಗಳ ಸಾಂದರ್ಭಿಕ ಪರಿಚಯವಿದ್ದರೂ ನನ್ನ ಸ್ವಹಿತಾಸಕ್ತಿಗೆಂದು ಯಾರ ಬಳಿಯೂ ಕೈಕಟ್ಟಿ ನಿಂತಿಲ್ಲ.

ಆದರೆ ತಮ್ಮಲ್ಲಿ ಅನೇಕರ ಪ್ರೀತಿ ಮತ್ತು ನಂಬಿಕೆಗಳು ಸಿಕ್ಕಿವೆ. ಈ ದೀಪಾವಳಿಯ ಬೆರಗು ಇದು. ದಿನೇ ದಿನೇ ಅಂದಗೊಳ್ಳುತ್ತಿರುವ ಶಾಲೆ, ಶಾಲೆಯ ಬಾಗಿಲು ಯಾವಾಗ ತೆರೆಯುತ್ತದೋ ಎಂದು ಹಂಬಲಿಸುವ ಮಕ್ಕಳು, ‘ನಾಳೆ ಏನು ಕೆಲಸ ಮಾಡಬೇಕು ಸರ್’ ಎಂದು ದುಂಬಾಲು ಬೀಳುವ ಊರಿನ ಯುವಮನಸ್ಸುಗಳು, ಶಾಲೆಯ ಅಗತ್ಯಗಳಿಗೆ ತಕ್ಕಂತೆ ಶ್ರಮವಹಿಸುತ್ತಿರುವ ಸಹೋದ್ಯೋಗಿ ಬಂಧುಗಳು ಇದಕ್ಕಿಂತ ಸೊಗಸಾದ ದೀಪಾವಳಿ ಎಲ್ಲಿ ಸಿಕ್ಕೀತು ಅಲ್ಲವೆ?

ಈ ಜಗತ್ತಿನಲ್ಲಿ ನಂಬಿಕೆಯಂತಹ ಮೌಲ್ಯ ಯಾವುದೂ ಇಲ್ಲ. ನಾನು ನನ್ನ ಒಳಮನಸ್ಸನ್ನು ನಂಬುತ್ತೇನೆ, ನಮ್ಮ ಮಕ್ಕಳು ನಮ್ಮನ್ನು ನಂಬುತ್ತಾರೆ. ಬದುಕು ಹಸನಾಗುವುದು ಹೀಗೆಯೇ.

ಬದಲಾವಣೆ ಎನ್ನುವುದು ಅಧಿಕಾರ, ಶಕ್ತಿಕೇಂದ್ರಗಳನ್ನೇ ನೆಚ್ಚಬೇಕಿಲ್ಲ. ಬದಲಾಯಿಸುವ ಛಲ, ಇಚ್ಛಾಶಕ್ತಿ ಮತ್ತು ನಂಬಿಕೆಗಳಿದ್ದರೆ ಯಾವುದೂ ಅಸಾಧ್ಯವಲ್ಲ.

ತಾವೆಲ್ಲ ನಮ್ಮ ಶಾಲೆಯನ್ನ, ನಮ್ಮ ಮಕ್ಕಳನ್ನ ನಮ್ಮನೆಲ್ಲ ಪೊರೆದಿದ್ದೀರಿ, ಸಹಾಯ ಮಾಡಿದ್ದೀರಿ. ಅದಕ್ಕೆ ಕೃತಜ್ಞತೆ, ಹೃದಯಪೂರ್ವಕ ನಮಸ್ಕಾರಗಳು.

ತಮ್ಮೆಲ್ಲರಲ್ಲಿ ಒಂದು ವಿನಂತಿ,
ನಮ್ಮ ಶಾಲೆಗೆ ಸಹಾಯ ಮಾಡಿದಂತೆ ನಿಮ್ಮ ನಿಮ್ಮ ಊರಿನ, ನೀವು ಕಲಿತ, ನಿಮ್ಮ ಪರಿಚಯದ ಶಾಲೆಗಳಲ್ಲೂ ಸಾಧ್ಯವಾದ ಬದಲಾವಣೆಗಳನ್ನ ತರಲಿ. ಈ ದೀಪಾವಳಿಯ ಹೊತ್ತಿಗೆ ನಮ್ಮ ಶಾಲೆಯ ಮಕ್ಕಳಿಗೆ ದೊರೆತ ತಮ್ಮ ಪ್ರೀತಿ ಅಭಿಮಾನದ ಬೆಳಕು ಎಲ್ಲರಿಗೂ ದಕ್ಕಲಿ. ತಮ್ಮಿಂದ ಸಾಧ್ಯವಾದ ಬದಲಾವಣೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ. ನನಗೂ ಹಂಚಿ.

ಎಲ್ಲರಿಗೂ ದೀಪಾವಳಿ ಸಂಭ್ರಮ ತರಲಿ.

– ವೀರಣ್ಣ ಮಡಿವಾಳರ
+91 9972120570.
ಇದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ರಾಯಭಾಗ ತಾಲ್ಲೂಕಿನ ನಿಡಗುಂದಿಯ ಅಂಬೇಡ್ಕರ್ ನಗರದ ಸರ್ಕಾರಿ ಶಾಲೆಯಲ್ಲಿನ ಶಿಕ್ಷಕರೊಬ್ಬರ ಮೆಸೇಜ್. ಶಾಲೆಯಲ್ಲಿ ಅನೇಕ‌ ಬದಲಾವಣೆಗಳನ್ನು ತರುತ್ತಿರುವ ಇವರ ಮನದಾಳದ‌ ಮಾತುಗಳಿವು

Leave a Reply