Government School Bhootharamana Hatti Belagavi

ಬೆಳಗಾವಿ ತಾಲ್ಲೂಕಿನ ಗಡಿ ಭಾಗದ ಶಾಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಭೂತರಾಮನ ಹಟ್ಟಿ. ಬೆಳಗ್ಗೆ ೮.೩೦ ಕ್ಕೆ ನನ್ನ ಹೋಟೆಲ್ ಕೋಣೆಗೆ ಆಗಮಿಸಿದ ಆ ಶಾಲೆಯ ಕಿರಿಯ ಶಿಕ್ಷಕ, ಮಿ ಸುಣಗಾರ್ ಇವರಿಂದ, ಶಾಲೆಗೆ ಬರಲೇಬೇಕು ಎಂಬ ಒತ್ತಾಯ. ಯಾವ ಶಿಕ್ಷಕರು ತಾನೆ ನಿರ್ದೇಶಕರನ್ನು ಈ ರೀತಿ ಬಲವಂತದಿಂದ ನಮ್ಮ ಶಾಲೆಗೆ ಬರಲೇಬೇಕು ಎಂದು ಕರೆಯುತ್ತಾರೆ? ಆಶ್ಚರ್ಯ, ಹೀಗೆ ಕರೆಯಬೇಕಾದರೆ, ಈ ಶಾಲೆಯಲ್ಲಿ ಉತ್ತಮವಾದುದನ್ನು ನಮ್ಮ ಶಿಕ್ಷಕ ಮಿತ್ರರು ಮಾಡಿರಲೇ ಬೇಕು, ಎಂದು ಅಂದು ಕೊಂಡು, ಅವರ ಧೈರ್ಯ ಮೆಚ್ಚಿದೆ. ಹೋಗದೇ ಇದ್ದಲ್ಲಿ ಅವರ ಶಾಲೆಯ ಮುಖ್ಯ ಶಿಕ್ಷಕರಿಗೆ, ಸಹ ಶಿಕ್ಷಕರಿಗೆ,ತಯಾರಿ ಮಾಡಿಕೊಂಡಿರುವ ಮಕ್ಕಳಿಗೆ ನೋವಾಗಬಹುದೇನೋ ಎಂದು ಯೋಚಿಸಿ, ಆಯ್ತು, ನಡೀ ಹೊಗೋಣ ಎಂದು ಅವರ ಜೊತೆ ನಾನು ಹೊರಟೇ ಬಿಟ್ಟೆ. ಬೆಳಗಾವಿಯಿಂದ ಸುಮಾರು ೯ರಿಂದ ೧೦ ಕಿ ಮೀ ಇರಬಹುದೇನೋ? ಹೋಗಿ ನೋಡಿದರೆ ಶಾಲೆಯ ಹೊರಗೆ ಉತ್ತಮ ಪರಿಸರ ಕಾಣಬರಲಿಲ್ಲ. ಆದರೆ ಶಾಲೆಯ ಒಳಗೆ ಕಾಲಿಟ್ಟರೆ ಅಬ್ಬಾ, ಉತ್ತಮ ಪರಿಸರ ರೂಪಿಸಿರುವ ಶಾಲೆ. ಉತ್ತಮ ಅಭ್ಯಾಸಗಳನ್ನು ಆಚರಣೆಗೆ ತಂದಿರುವ ಶಾಲಾ ಶಿಕ್ಷಕ ಸಮೂಹ, ೧)ಪ್ರಾರ್ಥನೆ ಆದ ಮೇಲೆ ತರಗತಿಯ ನಾಯಕ ಮಕ್ಕಳ ತಲೆ ಎಣಿಕೆ ಮಾಡಿ ಹಾಜರಾತಿ ಲೆಕ್ಕ ಹಾಕಿ ತಕ್ಷಣವೇ ವರದಿ ಒಪ್ಪಿಸಿ ದಾಖಲಿಸುವ ವ್ಯವಸ್ಥೆ. ೨) ವೇದಿಕೆಯಲ್ಲಿ ಕುಳಿತ ಮಕ್ಕಳಿಂದ ೧.ಸುಭಾಷಿತ, ೨.ಪತ್ರಿಕೆ ಓದುವುದು,೩.ಪುಸ್ತಕ ಪರಿಚಯ, ಹೀಗೆ ಐದು ಕಾರ್ಯಕ್ರಮ ಆದ ಮೇಲೆ ನಾಳೆ ಯಾರಿಗೆ ಈ ಜವಾಬ್ದಾರಿ? ಎಂಬ ಬಗ್ಗೆ ಇಂದಿನ ವಿದ್ಯಾರ್ಥಿ ಗಳಿಂದಲೇ ನಾಳೆಗೆ ಪ್ರಕಟಣೆ. ಪ್ರತಿ ಮರಗಳಿಗೂ ಒಂದೊಂದು ಉಕ್ತಿಯನ್ನು ಬರೆದ ಫಲಕಗಳು,ಸ್ವಚ್ಚತಾ ಕೆಲಸ, ತಂತ್ರಜ್ಞಾನ ಬಳಸಿ ಬೋಧನೆ, ಇಲ್ಲಿ ಹೇಳಲು ಸಾಲದು ಜಾಗ, ಶಿಕ್ಷಕರ ತುಡಿತ, ಮಕ್ಕಳ ಆಸಕ್ತಿ, ಅವರ ಕಣ್ಣುಗಳಲ್ಲಿ ಕಂಡುಬರುವ ರೀತಿ, ಇನ್ನೂ ಸಾಕಷ್ಟು ಮಾಡಬೇಕೆಂಬ ತುಡಿತ, ಮೆಚ್ಚುಗೆಗೆ ಅರ್ಹವಾದುದು.ಹೆಚ್ಚು ಕಾಲ ಅಲ್ಲಿರಲಾಗಲಿಲ್ಲ. ಕ್ಷಮೆ ಇರಲಿ,ನಾಡಗೀತೆ, ರಾಷ್ಟ್ರಗೀತೆ ಹಾಡುವ ಬಗ್ಗೆ ಗ್ರಾಮಾಂತರ ಮಕ್ಕಳಿಗೆ ಇನ್ನಷ್ಟು ತಯಾರಿ ಮಾಡುವ ಅಗತ್ಯವಿದೆ.ಮಕ್ಕಳ ಸ್ಪಷ್ಟ ಓದುವಿಕೆ ಇನ್ನೂ ಉತ್ತಮವಾಗಬೇಕು. ಮಕ್ಕಳಿಗೆ ತರಬೇತಿ ನೀಡಿ ತಯಾರಿ ಮಾಡಿದರೆ ಯಾವುದೇ ಉತ್ತಮ ಶಾಲೆಗೆ ಸಡ್ಡು ಹೊಡೆಯಬಹುದಾದ ಶಾಲೆ, ಈ ಶಾಲೆ. ನಿರಂತರವಾಗಿ ನಿರ್ವಹಣೆ ಮಾಡುವರೆಂಬ ನಂಬಿಕೆಯನ್ನು ಶಿಕ್ಷಕರ ಮೇಲೆ ಇಡಬಹುದಾಗಿದೆ.ಇದು ಉಳಿದ ಶಾಲೆಗಳಿಗೆ,ಮಾದರಿಯಾಗಬಹುದೆಂಬುದರಲ್ಲಿ ಯಾವ ಅನುಮಾನವೂ ಇಲ್ಲ.

Thanks to Mr. Jayakumar for sharing the success story of this government school

Leave a Reply