Group Discussions – June 06 2016 Part 1

Girish Mudigere added Ramesh Sampath VMS: Welcome Sampath Sir and Ramesh Sir
Ramesh: Thanks a lot Girish sir adding me here

Dyavanoor Manjunath 2: ಸಮಾನ ಶಿಕ್ಷಣಕ್ಕಾಗಿ ಜನಾಂದೋಲನವು ಕಳೆದ ಐದು ವರ್ಷಗಳಿಂದ ಕರ್ನಾಟಕದಲ್ಲಿ ಶಿಕ್ಷಣದ ವ್ಯಾಪಾರೀಕರಣದ ಹಾಗೂ ಶಿಕ್ಷಣದಲ್ಲಿನ ಅಸಮಾನತೆಯ ವಿರುದ್ಧ, ಸಮಾನ ಶಾಲಾ ವ್ಯವಸ್ಥೆಯ ಸ್ಥಾಪನೆಗಾಗಿ ಹತ್ತು ಹಲವು ರೀತಿಗಳಲ್ಲಿ ಕ್ರಿಯಾಶೀಲವಾಗಿರುವ ಒಕ್ಕೂಟವಾಗಿದೆ. ಹಾಗೆಯೇ, ‘ಅಖಿಲ ಭಾರತ ಶಿಕ್ಷಣ ಹಕ್ಕು ಸಮಿತಿ’ಯ ಸದಸ್ಯ ಸಂಘಟನೆಯಾಗಿ ಅಖಿಲ ಭಾರತ ಮಟ್ಟದಲ್ಲೂ ಇದೇ ಹೋರಾಟದಲ್ಲಿ ಸಮಾನ ಶಿಕ್ಷಣಕ್ಕಾಗಿ ಜನಾಂದೋಲನವು ತೊಡಗಿದೆ. ಕೇವಲ ಸರ್ಕಾರವನ್ನು ಒತ್ತಾಯಿಸುವುದು ಮಾತ್ರವಲ್ಲದೆ, ಸ್ವತಃ ಸರ್ಕಾರಿ ಶಾಲೆಗಳ ಬಲವರ್ಧನೆಗಾಗಿ ‘ಸರ್ಕಾರಿ ಶಾಲೆ ಉಳಿಸಿ ಅಭಿಯಾನ’ವನ್ನು ಕೈಗೊಂಡಿದೆ. ಸರ್ಕಾರಿ ಶಾಲೆಗಳನ್ನೂ ಸಮರ್ಪಕವಾಗಿ ನಿರ್ವಹಿಸಿದಲ್ಲಿ ಉತ್ತಮ ಶಿಕ್ಷಣ ದೊರೆಯಲು ಸಾಧ್ಯ ಹಾಗೂ ಪೋಷಕರು ಖಾಸಗಿ ಶಾಲೆಗಳಿಗೆ ಹೋಗದೆ ಸರ್ಕಾರಿ ಶಾಲೆಗಳನ್ನೇ ನಂಬಲು ಸಾಧ್ಯ ಎಂಬುದನ್ನು ಜನಾಂದೋಲನದ ಸದಸ್ಯರು ಹಲವು ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಸಾಧಿಸಿ ತೋರಿಸಿದ್ದಾರೆ. ಜೊತೆಗೆ, ಬಿಡಿಬಿಡಿಯಾಗಿ ಇಂತಹದ್ದೇ ಪ್ರಯತ್ನದಲ್ಲಿ ನಿರತರಾಗಿರುವ ಶಾಲಾ ಸಮುದಾಯವನ್ನೂ (ಪೋಷಕರು, ಶಿಕ್ಷಕರು, ಹಳೇ ವಿದ್ಯಾರ್ಥಿಗಳು) ಸಂಪರ್ಕಿಸಿ, ಪರಸ್ಪರ ಬೆಸೆಯುವ ಪ್ರಯತ್ನದಲ್ಲೂ ತೊಡಗಿದ್ದೇವೆ.

ಆದರೆ, ರಾಜ್ಯ ಸರ್ಕಾರ ೩೦೦೦ ಸರ್ಕಾರಿ ಶಾಲೆಗಳನ್ನು ಮುಚ್ಚುವ (ವಿಲೀನ ಎಂದರೆ ಮುಚ್ಚುವುದು ಎಂದೇ ಅರ್ಥ) ಮಾತನ್ನಾಡುತ್ತಿದೆ. ಈಗಾಗಲೇ ೭೯೧ ಸರ್ಕಾರಿ ಶಾಲೆಗಳು ಈ ಶೈಕ್ಷಣಿಕ ವರ್ಷದಲ್ಲಿ ಆರಂಭವೇ ಆಗಿಲ್ಲ ಎಂಬ ಮಾಧ್ಯಮದ ವರದಿಗಳು ಆತಂಕ ಮೂಡಿಸುತ್ತಿವೆ. ಈ ರೀತಿ ಸುದ್ದಿಯಾಗದೆಯೇ ಹಿಂದಿನ ಎರಡು ವರ್ಷಗಳಲ್ಲೂ ಒಂದಷ್ಟು ಸರ್ಕಾರಿ ಶಾಲೆಗಳು ಕೊನೆಯುಸಿರೆಳೆದಿರುವುದು ನಮಗೆ ಗೊತ್ತು. ಹಾಸನ ಜಿಲ್ಲೆಯ ಒಂದರಲ್ಲಿಯೇ ೧೩೯೮ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ವಿಚಾರದ ಕುರಿತ ಸರ್ಕಾರದ ಧೋರಣೆ ಮತ್ತು ಸಚಿವರ ನಿರ್ಧಾರ ಯಾವ ರೀತಿಯಲ್ಲೂ ಸಮರ್ಥನೀಯವಲ್ಲ. ಅಧಿಕಾರಕ್ಕೆ ಬರುವ ಮೊದಲು ‘ಸಮಾನ ಶಾಲೆ’ಗಳನ್ನು ತರುವ ಆಶ್ವಾಸನೆಯನ್ನು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವುದನ್ನು ಹಾಗೂ ಶಿಕ್ಷಣ ಸಚಿವರು ‘ಶಾಲೆಗಳನ್ನು ಮುಚ್ಚುವುದಿಲ್ಲ’ ಎಂಬ ಭರವಸೆ ನೀಡಿದ್ದನ್ನು ಸಂರ್ಪೂವಾಗಿ ಮರೆತು, ಇಂತಹ ಶಿಕ್ಷಣ ವಿರೋಧಿ ಕ್ರಮಕ್ಕೆ ಸರ್ಕಾರ ಮುಂದಾಗಿರುವುದನ್ನು ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ ಮತ್ತು ದ್ಯಾವನೂರು ಪ್ರತಿಷ್ಠಾನ ತೀವ್ರವಾಗಿ ಖಂಡಿಸುತ್ತದೆ.

ಸರ್ಕಾರಿ ಶಾಲೆಗಳಿಗೆ ರಾಜ್ಯ ಸರ್ಕಾರ ೩೨ ಬಗೆಯ ಸವಲತ್ತುಗಳನ್ನು ನೀಡುವುದಾಗಿ ಹೇಳುತ್ತಿದೆ. ಆದರೆ, ಶಾಲೆ ನಡೆಯಲು ಮೂಲಾಧಾರವಾಗಿ ಬೇಕಿರುವುದು ಪರಿಣತ ಶಿಕ್ಷಕರೇ ಹೊರತು ಸವಲತ್ತುಗಳಲ್ಲ ಎಂಬುದನ್ನು ಸರ್ಕಾರ ಅರಿಯಬೇಕಿದೆ. ಖಾಲಿ ಶಿಕ್ಷಕರ ಹುದ್ದೆಗಳಿಗೆ ಖಾಯಂ ನೇಮಕಾತಿ ಇನ್ನೂ ಆಗಿಲ್ಲ ಮಾತ್ರವಲ್ಲ (ಇದಕ್ಕೆ ಹೈದ್ರಾಬಾದ್ ಕರ್ನಾಟಕದ ಅಭ್ಯರ್ಥಿಗಳ ನೇಮಕಾತಿ ಗೊಂದಲ ಕಾರಣ ಎಂದು ಸಚಿವರು ಹೇಳುತ್ತಿದ್ದಾರೆ), ಕನಿಷ್ಠ ಖಾಲಿ ಸ್ಥಾನಗಳಿಗೆ ಅತಿಥಿ ಶಿಕ್ಷಕರನ್ನಾದರೂ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಒದಗಿಸುತ್ತಿಲ್ಲ. ಅಷ್ಟೇ ಅಲ್ಲದೆ, ಇಂದಿನ ದಿನಮಾನಕ್ಕೆ ತಕ್ಕಂತೆ ಸರ್ಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟವನ್ನು ಉತ್ತಮಪಡಿಸಬಲ್ಲ ಪರಿಣಾಮಕಾರಿ ಬೋಧನೆ, ಇಂಗ್ಲೀಷ್ ಮತ್ತು ಇತರ ಭಾಷಾ ಶಿಕ್ಷಕರಿಗೆ ಸೂಕ್ತ ತರಬೇತಿ, ಮಕ್ಕಳಿಗೆ ಕಂಪ್ಯೂಟರ್ ಮೊದಲಾದ ಅವಶ್ಯಕ ನೈಪುಣ್ಯಗಳ ಕಲಿಕೆ, ರಂಗಭೂಮಿಯೊಂದಿಗೆ ಕಲಿಕೆ, ಪರಿಸರ ಸ್ನೇಹಿ ಕಲಿಕೆ ಇತ್ಯಾದಿ ಸೃಜನಶೀಲ ವಿಧಾನಗಳ ಅಳವಡಿಕೆ ಮೊದಲಾದ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಇವೆಲ್ಲದರ ಜೊತೆಗೆ, ಶಿಕ್ಷಣವನ್ನು ವ್ಯಾಪಾರೀಕರಣ ಮಾಡುತ್ತಿರುವ ಖಾಸಗಿ ಸಂಸ್ಥೆಗಳ ನಿಯಂತ್ರಣಕ್ಕೂ ಗಂಭೀರವಾದ ಪ್ರಯತ್ನ ನಡೆದಿಲ್ಲ.

ಈ ಎಲ್ಲಾ ಹಿನ್ನೆಲೆಯಲ್ಲಿ, ‘ಸರ್ಕಾರಿ ಶಾಲೆಗಳ ಉಳಿವಿಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳದ ಸರ್ಕಾರಕ್ಕೆ ಶಾಲೆಗಳನ್ನು ಮುಚ್ಚುವ ಹಕ್ಕಿಲ್ಲ’ ಎಂಬ ಹೋರಾಟವನ್ನು ಸಮಾನ ಶಿಕ್ಷಣಕ್ಕಾಗಿ ಜನಾಂದೋಲನವು ಸಮಾನ ಮನಸ್ಕರ ಬೆಂಬಲದೊಂದಿಗೆ ರಾಜ್ಯಾದ್ಯಂತ ಹಮ್ಮಿಕೊಂಡಿದೆ. ಜೂನ್ ೪ರಂದು ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿಯನ್ನೂ ನೀಡಲಿದೆ.

ನಮ್ಮ ಹಕ್ಕೊತ್ತಾಯಗಳು:

೧. ಖಾಲಿ ಇರುವ ಎಲ್ಲಾ ಸ್ಥಾನಗಳಿಗೆ ಶಿಕ್ಷಕರ ನೇಮಕಾತಿ ಮಾಡಿ, ಒಂದು ವರ್ಷ ಸರ್ಕಾರಿ ಶಾಲೆಗಳ ಹಾಜರಾತಿ ಹೆಚ್ಚಿಸಲು ಪೂರ್ಣ ಮನಸ್ಸಿನಿಂದ ಪ್ರಯತ್ನ ಮಾಡುವವರೆಗೆ ಸರ್ಕಾರ ಒಂದು ಶಾಲೆಯನ್ನೂ ಕೂಡಾ ಮುಚ್ಚಬಾರದು. ಸಮಾನ ಶಿಕ್ಷಣಕ್ಕಾಗಿ ಜನಾಂದೋಲನದಂತಹ ಜನಚಳವಳಿಗಳು ಹಾಗೂ ಆಸಕ್ತ ಪೋಷಕರು-ಶಿಕ್ಷಕರು ತಮ್ಮದೇ ಸಣ್ಣ ಮಟ್ಟದ ಪ್ರಯತ್ನದಲ್ಲಿ ಈ ರಾಜ್ಯದಲ್ಲಿ ಸುಮಾರು ೭೦೦ರಷ್ಟು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ, ಹಾಜರಾತಿಯನ್ನು ಗಣನೀಯವಾಗಿ ಹೆಚ್ಚಿಸಲು ಸಾಧ್ಯವಾಗುವುದಾದರೆ, ಅಧಿಕಾರದಲ್ಲಿರುವ ಸರ್ಕಾರಕ್ಕೆ ಏಕೆ ಸಾಧ್ಯವಿಲ್ಲ ಎಂಬ ಸಾರ್ವಜನಿಕರ ಪ್ರಶ್ನೆಗೆ ಸರ್ಕಾರ ಉತ್ತರ ಹೇಳಬೇಕಾಗುತ್ತದೆ.

೨. ಅನಧೀಕೃತ ಶಾಲೆಗಳನ್ನು ಮುಚ್ಚುವುದರಿಂದ ಯಾಕೆ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ.

೩. ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಬೋಧನೆಗೆ ಅದಕ್ಕಾಗಿಯೇ ತರಬೇತಾದ ಶಿಕ್ಷಕರನ್ನು ನೇಮಿಸಬೇಕು. ಈಗಿರುವವರಿಗೆ ಸರಿಯಾದ ತರಬೇತಿ ನೀಡಬೇಕು. ಎಲ್ಲಾ ವಿಷಯಗಳಿಗೂ ಇಂತಹ ತರಬೇತಿ ನೀಡುವ ಮತ್ತು ಶಾಲೆಗಳನ್ನು ಅಭಿವೃದ್ಧಿಪಡಿಸುವ ಯೋಜನೆಗಳು ಉದ್ದೇಶಿತ ಗುರಿ ತಲುಪಲು, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು, ಹಳೆಯ ವಿದ್ಯಾರ್ಥಿ ಸಂಘದ ಪ್ರತಿನಿಧಿಗಳು, ಸಂಘಸಂಸ್ಥೆಗಳ ಪದಾಧಿಕಾರಿಗಳನ್ನು ಒಳಗೊಂಡಂತೆ ಪಾಲುದಾರರನ್ನು (ಸ್ಟೇಕ್ ಹೋಲ್ಡರ್‍ಸ್) ಒಳಗೊಂಡ ಮೇಲುಸ್ತುವಾರಿ ಸಮಿತಿಗಳನ್ನು ರಚಿಸಬೇಕು.

೪. ಸರ್ಕಾರಿ ಶಾಲೆಗಳಿಗೆ ಅನುದಾನ ಹೆಚ್ಚಳ ಮಾಡಿ, ಅತ್ಯುತ್ತಮ ಸೌಕರ್ಯಗಳನ್ನು ಒದಗಿಸಬೇಕು. ಇದಕ್ಕಾಗಿ ಕೇಂದ್ರೀಯ ವಿದ್ಯಾಲಯಗಳಿಗೆ ಅನುಸರಿಸುತ್ತಿರುವ ಮಾನದಂಡಗಳನ್ನೇ ಸರ್ಕಾರ ರಾಜ್ಯ ಸರ್ಕಾರದ ಶಾಲೆಗಳಿಗೂ ಅಳವಡಿಸಬೇಕು. ಈಗಾಗಲೇ ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ ಶಿಕ್ಷಣಕ್ಕೆ ಹಣಕಾಸು ಜವಾಬ್ದಾರಿ ಕೇಂದ್ರ ಸರ್ಕಾರದ್ದೂ ಆಗಿರುತ್ತದೆಯಾಗಿರುವುದರಿಂದ, ಕೇಂದ್ರದಿಂದ ಹೆಚ್ಚುವರಿ ಅನುದಾನಕ್ಕಾಗಿ ಬೇಡಿಕೆ ಮುಂದಿಟ್ಟು ಪ್ರಯತ್ನಿಸಬೇಕು.

೫. ಪ್ರತೀ ಶಾಲೆಗೂ ಮಕ್ಕಳ ಮನೆ (ಎಲ್‌ಕೆಜಿ-ಯುಕೆಜಿ ಮಾದರಿಯಲ್ಲಿ) ಆರಂಭಿಸಲು, ಅಧಿಕೃತ ಆದೇಶ ಹೊರಡಿಸಬೇಕು. ಅಂಗನವಾಡಿ ಮತ್ತು ಮಕ್ಕಳ ಮನೆ ಮಕ್ಕಳ ವಯೋಮಿತಿಯ ಗೊಂದಲ ಸರಿಪಡಿಸಬೇಕು.

೬. ಶಿಕ್ಷಣ ಮಾಧ್ಯಮದ ಗೊಂದಲ ಬಗೆಹರಿಸಲು, ಪಿಯುಸಿ ಮತ್ತು ನಂತರದ ಹಂತದಲ್ಲಿ ವಿಜ್ಞಾನ ವಿಷಯವನ್ನೂ ಕನ್ನಡದಲ್ಲಿ ಅಭ್ಯಸಿಸುವ ಅವಕಾಶ ನೀಡಬೇಕು. ಇದಕ್ಕಾಗಿ ಅಗತ್ಯ ಪಠ್ಯಗಳನ್ನು ಅಭಿವೃದ್ಧಿಪಡಿಸುವುದು ಸರ್ಕಾರದ ಜವಾಬ್ದಾರಿ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

೭. ಖಾಸಗಿ ಶಾಲೆಗಳ ಶುಲ್ಕಸಂಗ್ರಹಕ್ಕೆ ನಿರ್ದಿಷ್ಟ ಮಾರ್ಗಸೂಚಿ ಕಟ್ಟುನಿಟ್ಟಾಗಿ ಅಳವಡಿಸಬೇಕು. ಅನಧಿಕೃತ ಶಾಲೆಗಳನ್ನು ತಕ್ಷಣವೇ ಮುಚ್ಚಿಸಬೇಕು. ಸರ್ಕಾರಿ ಶಾಲೆಗಳಿಗೆ ತೊಂದರೆಯಾಗುವಂತೆ ಖಾಸಗಿ ಶಾಲೆಗಳನ್ನು ತೆರೆಯಲು ಅವಕಾಶ ನೀಡಬಾರದು.

೮. ‘ಸಮಾನ ಶಿಕ್ಷಣ ಕಾಯ್ದೆ’ಯನ್ನು ಜಾರಿಗೊಳಿಸಬೇಕು.

Leave a Reply