ಗುಣಾಕಾರ

ಗುಣಾಕಾರ

48 x 36 ಈ ಗುಣಾಕಾರ ಮಾಡಲು, ನಾವು ಶಾಲೆಯಲ್ಲಿ ಕಲಿತ ರೀತಿಯಲ್ಲಿ ಮೂರು ಸಾಲುಗಳ ಗಣಿತವಿದೆ.
ಇದರ ಉತ್ತರ 1728. ಇದನ್ನು ನಾನು ಮನಸ್ಸಿನಲ್ಲೇ ಗುಣಿಸಿ ಬರೆದು, ಕ್ಯಾಲ್ಕುಲೇಟರ್ ನಲ್ಲಿ ಸರಿ ಇದೆಯೋ ಇಲ್ಲವೋ ಎಂದು ಪರೀಕ್ಷಿಸಿದೆ.(ಈಗೀಗ ಹೆಚ್ಚು ಅಭ್ಯಾಸ ಇಲ್ಲದ ಕಾರಣ ಕ್ಯಾಲ್ಕುಲೇಟರ್ ಮೂಲಕ ಪರೀಕ್ಷಿಸಬೇಕಾಯಿತು. ಗಣಿತಕ್ಕೆ ಬೇಕಾಗಿರುವುದು ಅಭ್ಯಾಸ.)
ನಾನು ಹೇಳುವ ಪದ್ದತಿಯಲ್ಲಿ ಗುಣಿಸುವಿಕೆ ಮತ್ತು ಕೂಡುವಿಕೆ ಇದೆ. ಆದರೆ, ಹೆಚ್ಚು ತಲೆ ಬಿಸಿ (ಮಂಡೆ ಬೆಚ್ಚ) ಮಾಡಲಿಕ್ಕಿಲ್ಲ.
ಹೇಗೆಂದು ನೋಡೋಣ. ವಿವರ ಕೊಡುವಾಗ, ಸ್ವಲ್ಪ ವಿಸ್ತಾರವಾಗಿ ಕಾಣಬಹುದು.
31
X 32
2
1 ಕ್ಕೆ 2 ರಿಂದ ಗುಣಿಸಿದಾಗ 2 ಸಿಗುತ್ತದೆ. ಅದನ್ನು ಬರೆಯಿರಿ.
ಈಗ ಸ್ವಲ್ಪ ಅಡ್ಡ ಗುಣಾಕಾರ ಮಾಡಿ ಅವನ್ನು ಕೂಡಿಸಬೇಕು. ಅಂದರೆ 3 ಮತ್ತು 2 ಗುಣಿಸಿ( 3×2 = 6), ನಂತರ 1 ಮತ್ತು 3ನ್ನು ಗುಣಿಸಿ( 1 x 3 = 3). ಇವೆರಡನ್ನೂ ಕೂಡಿಸಿ(6+3=9). ಈ 9 ನ್ನು 2ರ ಎಡ ಪಕ್ಕದಲ್ಲಿ ಬರೆಯಿರಿ.
31
X 32
9 2
ಈಗ ಎರಡೂ ದಶ ಸ್ಥಾನದಲ್ಲಿರುವ (ಅಂದರೆ ಎಡ ಬಾಗದ ಅಂಕೆ) ಎರಡೂ ಅಂಕೆಗಳನ್ನು ಗುಣಿಸಿ (3×3 = 9), ಮೊದಲಿನ ಉತ್ತರದ ಎಡಭಾಗದಲ್ಲಿ ಬರೆಯಿರಿ.
31
X 32
992
31 x 32 = 992
*
ಈಗ ಸ್ವಲ್ಪ ಕಷ್ಟದ ಗುಣಾಕಾರ ಮಾಡೋಣ.
68 x 34
ಮೊದಲು ಏಕಸ್ಥಾನದ ಅಂಕೆಗಳನ್ನು ಗುಣಿಸೋಣ. 8 x 4 = 32.. ಈ ಉತ್ತರದ 2ನ್ನು ಬರೆದು, ಮೂರನ್ನು ಮನಸ್ಸಿನಲ್ಲಿ ನೆನಪಿಟ್ಟುಕೊಳ್ಳೋಣ
68
X34
2
ಈಗ ಅಡ್ದ ಗುಣಾಕಾರ ಮಾಡೋಣ. ಅಂದರೆ, 6 x 4 ಮತ್ತು 3 x 8 ಮಾಡಿ, ಅವನ್ನು ಕೂಡಿಸೋಣ. (6 x 4 =24, 3×8 = 24, 24 + 24 =48).
ಈ 48 ಕ್ಕೆ ಹಿಂದಿನ 3 ನ್ನು (32 ರ 3) ಕೂಡಿಸೋಣ ಅಂದರೆ 48 + 3 = 51
ಈಗ 2ರ ಎಡಬದಿಗೆ ಈ 1 ಬರೆದು 5ನ್ನು ನೆನಪಲ್ಲಿ ಇಟ್ಟುಕೊಳ್ಳೋಣ.
68
X34
1 2
ಕೊನೆಗೆ ದಶ ಸ್ಥಾನದ 6 ಮತ್ತು 3 ನ್ನು ಗುಣಿಸಿ, ಅದಕ್ಕೆ ಹಿಂದಿನ 5 ನ್ನು ಕೂಡಿಸೋಣ.(6 x 3 = 18, 18 +5 =23 ).
ಈ 23 ನ್ನು ಹಿಂದಿನ ಉತ್ತರ 12 ರ ಎಡ ಬದಿಗೆ ಬರೆಯಿರಿ.
68
X34
2312
68 x 34 = 2312
*
ಇದನ್ನು ಸ್ವಲ್ಪ ಅಭ್ಯಾಸ ಮಾಡಿದರೆ, ಮನಸ್ಸಿನಲ್ಲೇ ಉತ್ತರ ಹೊಳೆಯುತ್ತದೆ. ವಿವರಣೆ ಹೆಚ್ಚು ಉದ್ದವಾಗಿರುವುದು
ಮಾತ್ರ.
*
ಕೆಳಗೆ ಕೆಲವು ಲೆಕ್ಕ ಉತ್ತರದೊಂದಿಗೆ ಕೊಟ್ಟಿದ್ದೇನೆ. ನೀವು ಮನಸ್ಸಿನಲ್ಲೇ ಮಾಡಲು ಪ್ರಯತ್ನಿಸಿ. ತಪ್ಪಾದರೆ, ಎಲ್ಲಿ ತಪ್ಪಾಗಿದೆಯೆಂದು ಪರೀಕ್ಷಿಸಿ. ಪುನಹ ತಪ್ಪಾದರೆ, ಗಣಕಯಂತ್ರದ ಸಹಾಯದಿಂದ, ನನ್ನ ಉತ್ತರ ಪರೀಕ್ಷಿಸಿ. ನಾನೂ ತಪ್ಪು ಮಾಡಿರಬಹುದು.
62 x 68 = 4216, 54 x 65 = 3510, 87 x 48 = 4176

Leave a Reply